ಹೋವೆಲ್ಸ್, ವಿಲಿಯಂ ಡೀನ್
	1837-1920. ಅಮೆರಿಕದ ವಾಸ್ತವವಾದಿ ಕಾದಂಬರಿಕಾರ ಹಾಗೂ ವಿಮರ್ಶಕ. ಓಹಿಯೋದ ಮಾರ್ಟಿನ್ ಫೆರ್ರಿ ಎಂಬಲ್ಲಿ 1861ರಲ್ಲಿ ಜನಿಸಿದ. ಬಾಲ್ಯದಲ್ಲಿ ಮುದ್ರಕನಾಗಿ ದುಡಿಮೆಗೆ ಪ್ರಾರಂಭಿಸಿ ಶಾಲಾಶಿಕ್ಷಣದ ಅವಕಾಶ ದೊರೆಯದೆ ಸ್ವತಂತ್ರವಾಗಿಯೇ ಭಾಷೆ, ಸಾಹಿತ್ಯಗಳ ಅಧ್ಯಯನ ಮಾಡಿದ. ಅಮೆರಿಕದಲ್ಲಿ ವಾಸ್ತವವಾದ ತಲೆಯೆತ್ತುವ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಿದ. 40ಕ್ಕೂ ಹೆಚ್ಚು ಕಾದಂಬರಿಗಳನ್ನೂ ಕಥಾಸಂಕಲನಗಳನ್ನೂ ರಚಿಸಿದ್ದಾನೆ. 

	ಅಮೆರಿಕದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್‍ನ ಜೀವನ ಚರಿತ್ರೆಯನ್ನು ಲಿಂಕನ್ಸ್ ಬಯಾಗ್ರಫಿ ಎಂಬ ಶೀರ್ಷಿಕೆಯಲ್ಲಿ ಬರೆದ (1860). ವೆನಿಸಿನ ರಾಯಭಾರಿಯಾಗಿ  ನೇಮಕಗೊಂಡ. ವೆನಿಷಿಯನ್ ಲೈಫ್ (1866) ಇವನ ಮೊಟ್ಟಮೊದಲ ಪ್ರವಾಸಕೃತಿ. ಅಟ್ಲಾಂಟಿಕ್ ಮಂತ್ಲಿ, ಹಾರ್ಪರ್ಸ್ ಮ್ಯಾಗಜಿನ್ ಪತ್ರಿಕೆಗಳ ಸಂಪಾದಕನಾಗಿಯೂ (1871-81) ಕೆಲಸ ಮಾಡಿದ. ಈ ಸಂದರ್ಭದಲ್ಲಿ ಮಾರ್ಕ್‍ಟ್ವೇನ್, ಹ್ಯಾಮ್‍ಲಿನ್ ಗಾರ್‍ಲ್ಯಾಂಡ್, ಸ್ಟೀ¥sóÀನ್ ಕ್ರೇನ್ ಮೊದಲಾದ ವಾಸ್ತವವಾದಿ ಯುರೋಪಿಯನ್ ಬರೆಹಗಾರರನ್ನು ಅಮೆರಿಕದ ಓದುಗರಿಗೆ ಪರಿಚಯಿಸಿಕೊಟ್ಟ. 

	ಎ ಮಾಡರ್ನ್ ಇನ್ಸ್‍ಟನ್ಸ್ (1882), ದ ರೈಸ್ ಆಫ್ ಸೈಲಾಸ್ ಲ್ಯಾಫಮ್ (1885) - ಇವು ಇವನ ಪ್ರಸಿದ್ಧ ಕೃತಿಗಳು; ವಾಸ್ತವವಾದದ ದೃಷ್ಟಿಕೋನದಿಂದ ರಚನೆಗೊಂಡಂಥವು. ದ ರೈಸ್ ಆಫ್ ಸೈಲಾಸ್ ಲ್ಯಾಫಮ್ ಕೃತಿ ಬಾಸ್ಟನ್ ಸಮಾಜದಲ್ಲಿ ವಂಶಪಾರಂಪರ್ಯವಾಗಿ ಅಧಿಕಾರ ಸ್ಥಾನಮಾನಗಳನ್ನು ಹೊಂದಿದ್ದ ಕುಟುಂಬಗಳಿಂದ ನಿರ್ಬಂಧಕ್ಕೊಳಗಾದ ನಿಷ್ಠಾವಂತ ಉದ್ಯಮಿಯೊಬ್ಬನ ನೈತಿಕ ಬಿಡುಗಡೆಯನ್ನು ಕುರಿತದ್ದಾಗಿದೆ. ಎ ಹಸಾರ್ಡ್ ಆಫ್ ನ್ಯೂ ಫಾರ್‍ಚೂನ್ಸ್ (1890) ಎಂಬ ಕೃತಿ ಔದ್ಯೋಗೀಕರಣ, ವಲಸೆ ಹಾಗೂ ಸಮಾಜವಾದ ಮತ್ತು ಬಂಡವಾಳ ಶಾಹೀ ಪದ್ಧತಿಗಳ ನಡುವಿನ ಭಿನ್ನಾಭಿಪ್ರಾಯಗಳು ನ್ಯೂಯಾರ್ಕ್ ಪಟ್ಟಣದ ನಗರ ಸಮಸ್ಯೆಗಳಿಗೆ ಹೇಗೆ ಕಾರಣಗಳಾದವು ಎಂಬುದನ್ನು ಚಿತ್ರಿಸುತ್ತದೆ. 

	ಕ್ರಿಟಿಸಿಸಂ ಅಂಡ್ ಫಿಕ್ಷನ್ (1895), ಮೈ ಲಿಟರರಿ ಪ್ಯಾಷನ್ಸ್ (1895), ಲಿಟರೇಚರ್ ಅಂಡ್ ಲೈಫ್ (1902), ಲಿಟರರಿ ಫ್ರೆಂಡ್ಸ್ ಅಂಡ್ ಅಕ್ವೈಂಟೆನ್ಸ್ (1900)-ಇವು ಇವನ ಇತರ ಕೆಲವು ಪ್ರಮುಖ ಕೃತಿಗಳು. ಕೆಲವು ಲಘುಹಾಸ್ಯ ನಾಟಕಗಳನ್ನೂ ಈತ ಬರೆದಿದ್ದಾನೆ. ಸ್ವಂತ ಪರಿಶ್ರಮ ಹಾಗೂ ಪ್ರಭಾವಗಳಿಂದ ಅತ್ಯಂತ ಪ್ರಮುಖ ಸಾಹಿತಿಯಾಗಿ ಮಾನ್ಯತೆಗಳಿಸಿದ್ದ ಈತ ಹೆನ್ರಿಜೇಮ್ಸ್ ಮೊದಲಾದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದು ಗಮನಾರ್ಹ ಸಂಗತಿ. ಈತ 1920ರಲ್ಲಿ ನಿಧನನಾದ.	

											(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ